ಕುರ್ಚಿಮೀನು

ಟೀಲಿಯೋಸ್ಟಿಯೈ ಗಣದ ಲಿಯೋನ್ಯಾತಿಡೆ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಎಲುಬು ಮೀನು (ಸಿಲ್ವರ್ ಬೆಲ್ಲಿ ಅಥವಾ ಪೋನಿ ಫಿಶ್). ಲಿಯೋನ್ಯಾತಿಡೆ ಕುಟುಂಬಕ್ಕೆ ಸೇರಿದ ಲಿಯೋನ್ಯಾತಸ್ ಮತ್ತು ಗಸ್ಸ ಎಂಬ ಎರಡು  ಜಾತಿಯ ಮೀನುಗಳಿಗೆ ಈ ಹೆಸರಿದೆ. ಸಮುದ್ರವಾಸಿಯಾದ ಈ ಮೀನು ಆಳ ಹೆಚ್ಚಾಗಿಲ್ಲದ ನೀರಿನಲ್ಲಿ ದೊಡ್ಡ ದೊಡ್ಡ ಗುಂಪುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಳಿವೆಗಳಿಂದ ನದಿಗಳೊಳಕ್ಕೂ ಈಜಿಬರುವುದುಂಟು. ಭಾರತದ ಕರಾವಳಿ ಪ್ರದೇಶಗಳಲ್ಲಿ ಲಿಯೋನ್ಯಾತಸ್ ಜಾತಿಯ ಸುಮಾರು 16 ಪ್ರಭೇದಗಳು ಸಿಕ್ಕುತ್ತವೆ. ಇವುಗಳಲ್ಲಿ ಮುಖ್ಯವಾದವು ಲಿ.ಸ್ಪಂಡೆನ್ಸ್. ಲಿ.ಈಕ್ವಲಸ್, ಲಿ.ಬಿಂಡಸ್, ಲಿ.ಇನ್ಸಿಡೇಟರ್, ಲಿ.ರುಕೋನಿಯಸ್. ಇನ್ಸಿಡೇಟರ್ ಪ್ರಭೇದ ಮೈಸೂರು ಮತ್ತು ಮಹಾರಾಷ್ಟ್ರಗಳ ಕರಾವಳಿಯಲ್ಲಿ ಬಲುಸಾಮಾನ್ಯವಾಗಿ ಕಾಣಬರುತ್ತವೆ. ಬಿಂಡಸ್ ಪ್ರಭೇದದ ಈಜುರೆಕ್ಕೆಗಳು ಕಿತ್ತಳೆ ವರ್ಣದವಾಗಿರುವುದರಿಂದ ಇದನ್ನು ಕಿತ್ತಳೆ ರೆಕ್ಕೆಯ ಕುರ್ಚಿಮೀನು ಎಂದೂ ಕರೆಯುವುದುಂಟು. ಗಸ್ಸ ಜಾತಿಯ ಮೈನ್ಯೂಟ ಎಂಬ ಪ್ರಭೇದವೂ ಭಾರತದಲ್ಲಿ ಸಿಕ್ಕುತ್ತದೆ. ಕುರ್ಚಿಮೀನಿನ ದೇಹ ಸುಮಾರು 14 ಸೆಂ.ಮೀ. ಗಿಂತ ಉದ್ದವಿರುವುದಿಲ್ಲ. ಅಕ್ಕಪಕ್ಕಕ್ಕೆ ಚಪ್ಪಟೆಯಾಗಿದೆ. ದೇಹದ ಮೇಲಿರುವ ಹುರುಪೆಗಳು ಸೈಕ್ಲಾಯಿಡ್ ಮಾದರಿಯವು. ಕುರ್ಚಿಮೀನುಗಳು ತಮ್ಮ ಬಾಯನ್ನು ಬಹಳ ಮುಂದಕ್ಕೆ ಚಾಚಬಲ್ಲವು. ಬಾಯಿ ಅಂಗುಳಿನಲ್ಲಿ ಹಲ್ಲುಗಳಿಲ್ಲ. ದವಡೆಹಲ್ಲುಗಳು ಬಹಳ ಸಣ್ಣವು. ಈ ಮೀನುಗಳು ಬಹಳ ರುಚಿಯಾದ ಆಹಾರಮೀನುಗಳೆಂದು ಹೆಸರಾಗಿವೆ. ಕರ್ನಾಟಕದ ಕರಾವಳಿಯಲ್ಲಿ ಇವುಗಳನ್ನು ಗಣನೀಯ ಪ್ರಮಾಣದಲ್ಲಿ ಹಿಡಿದು ಮಾರಾಟ ಮಾಡಲಾಗುತ್ತದೆ. 2002-03 ರಲ್ಲಿ ಸುಮಾರು 3746 ಟನ್‍ಗಳಷ್ಟು ಮೀನುಗಳನ್ನು ಹಿಡಯಲಾಗಿತ್ತು. ಇವುಗಳ ದೇಹದಲ್ಲಿ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿರುವುದರಿಂದ ಇವನ್ನು ಸುಲಭವಾಗಿ ಬಿಸಿಲಿನಲ್ಲಿ ಒಣಗಿಸಬಹುದು. ಒಣಗಿಸುವಾಗ ಉಪ್ಪು ಸೇರಿಸುವ ಕ್ರಮ ಇದೆ. ಸಂಸ್ಕರಿಸಿದ ಮೀನುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಾರೆ. 
(ಎನ್.ವಿ.ಎ.)